ಬೌಮನ್, ವಿಲಿಯಮ್
1816-92. ಇಂಗ್ಲೆಂಡಿನ ಪ್ರಸಿದ್ಧ ನೇತ್ರ ವೈದ್ಯ. ಜನನ 20-7-1816, ಬರ್ಮಿಂಗ್‍ಹ್ಯಾಮಿನ ನೆರೆಯಲ್ಲಿದ್ದ ಹೇಸೆಲ್‍ವುಡ್ ಶಾಲೆಯಲ್ಲಿ ವಿದ್ಯಾಭ್ಯಾಸ. ಬುದ್ಧಿವಂತ ವಿದ್ಯಾರ್ಥಿ ಎಂದು ಹೆಸರು ಪಡೆದು ಅನೇಕ ಪಾರಿತೋಷಿಕ ಪಡೆದ. ಯಾವುದೋ ಸಂದರ್ಭದಲ್ಲಿ ಫಿರಂಗಿಮದ್ದನ್ನು ಪ್ರಯೋಗಾರ್ಥವಾಗಿ ಬಳಸಿದಾಗ ಅದು ಸಿಡಿದು ಅವನ ಕೈ ಗಾಯವಾಯಿತಂತೆ. ವೈದ್ಯ ಚಿಕಿತ್ಸೆಯಿಂದ ಆ ಗಾಯ ವಾಸಿ ಆಗುತ್ತಿದ್ದಾಗ ಕಂಡುಬಂದ ಸ್ವಾಭಾವಿಕ ಬದಲಾವಣೆಗಳನ್ನೆಲ್ಲ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದ ವಿಲಿಯಮ್ ತಾನೂ ವೈದ್ಯನಾಗಬೇಕೆಂದು ಮನಸ್ಸು ಮಾಡಿದನಂತೆ. ಇದು ಹೇಗೇ ಇರಲಿ ಈತ ಹದಿನಾರನೆಯ ವಯಸ್ಸಿನಲ್ಲಿ ಬರ್ಮಿಂಗ್‍ಹ್ಯಾಮ್ ಆಸ್ಪತ್ರೆಯ ಶಸ್ತ್ರವೈದ್ಯ ಜೋಸೆಫ್ ಹಾಡ್ಜ್‍ಸನ್ ಎಂಬವನ ಕೈ ಕೆಳಗೆ ಶಿಷ್ಯವೃತ್ತಿ ಪ್ರಾರಂಭಿಸಿದ್ದಂತೂ ನಿಜ. ಮುಂದೆ 2-3 ವರ್ಷಗಳಲ್ಲಿ ಅವನು ವೈದ್ಯಕೀಯ ವಿಷಯಗಳನ್ನು ಸ್ಪಷ್ಟವಾಗಿ ಪ್ರತಿಪಾದನೆ ಮಾಡುವ ಹಾಗೂ ಕಲಾತ್ಮಕವಾಗಿ ಮತ್ತು ಸ್ಫುಟವಾಗಿ ಚಿತ್ರಿಸುವ ನಿಪುಣತೆ ಗಳಿಸಿದ. ಇದೇ ವೇಳೆ ಬ್ಲಾಕಿಸ್ಟನ್ ಎಂಬ ವೈದ್ಯನಿಗಾಗಿ ಗುಂಡಿಗೆಗೆ ಸಂಬಧಪಟ್ಟಂತಿರುವ ನಾನಾದ್ವಾರಗಳ ವ್ಯಾಸ ಅಳೆದು ಕರಾರುವಾಕ್ಕು ಮಾಹಿತಿ ನೀಡಿದ ಸಹಾಯಕ್ಕಾಗಿ ಬ್ಲಾಕಿಸ್ಟನ್ ಬೌಮನ್ನನಿಗೆ ಉತ್ಕøಷ್ಟವಾದ ಒಂದು ಸೂಕ್ಷ್ಮದರ್ಶಕ ಬಹುಮಾನಿಸಿದ.

	1887ರಲ್ಲಿ ವಿಲಿಯಮ್ ಲಂಡನ್ನಿಗೆ ಬಂದು ಕಿಂಗ್ಸ್ ಕಾಲೇಜಿನಲ್ಲಿ ವೈದ್ಯ ವ್ಯಾಸಂಗಮಾಡಲು ಸೇರಿದ. ಅಲ್ಲಿ ರಾಬರ್ಟ್ ಟಾಡ್ ಶರೀರಕ್ರಿಯಾವಿಜ್ಞಾನದ ಪ್ರಾಧ್ಯಾಪಕನಾಗಿದ್ದ. ಈತನ ಶಿಷ್ಯನಾಗಿ 1840ರಲ್ಲಿ ವೈದ್ಯಪದವಿ ಗಳಿಸಿದ. ಕೂಡಲೆ ಲಂಡನ್ನಿನ ಕಿಂಗ್ಸ್ ಕಾಲೇಜ್ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್ ಸರ್ಜನ್ನಾಗಿ ನೇಮಕಗೊಂಡು ತನ್ನ ಗುರು ಟಾಡ್‍ನೊಡನೆ ದೇಹದ ನಾನಾ ಅಂಗಗಳ ಸೂಕ್ಷ್ಮ ರಚನೆ ಹಾಗೂ ಅವುಗಳ ಕ್ರಿಯೆಗಳ ವಿಚಾರ ವ್ಯಾಸಂಗ ಕೈಗೊಂಡ. ಐಚ್ಛಿಕ ಸ್ನಾಯಗಳು, ಯಕೃತ್ತು ಮತ್ತು ಮೂತ್ರಜನಕಾಂಗಗಳ ವಿಷಯವಾಗಿ ಪ್ರಬಂಧ ಪ್ರಕಟಿಸಿದ (1841-42). ಇವುಗಳಲ್ಲಿ ಬಲು ಮುಖ್ಯವಾದದ್ದು ಮೂತ್ರ ಜನಕಾಂಗದ ವಿಷಯ. ಮೂತ್ರಜನಕಾಂಗದಲ್ಲಿ ಒಂದಕ್ಕೊಂದು ಸಂಬಂಧವಿಲ್ಲದ ಸುಮಾರು ಹತ್ತುಲಕ್ಷ ಕ್ರಿಯಾಘಟಕಗಳಿವೆ. ಇವಕ್ಕೆ ನೆಫ್ರಾನುಗಳೆಂದು ಹೆಸರು. ಇವು ಚಂಡಿನಂತೆ ತಲೆ ಇರುವ ಬಲು ಉದ್ದವಾದ ಆದರೆ ಎರಡು ಕಡೆ ಗೊಜಿಬಿಜಿಯಾಗಿ ಸುತ್ತಿಕೊಂಡಿರುವ ದ್ವಿಪದರ ಕವಚಗಳು. ಪ್ರತಿಯೊಂದು ಕವಚದ ಎರಡು ಬೌಮನ್ ವಿಶದಪಡಿಸಿದ. ಇದರ ಸೂಕ್ಷ್ಮರಚನೆ ಗಮನಿಸಿ ಲೋಮನಾಳಗಳ ಗುಚ್ಛದಲ್ಲಿ ಹರಿಯುವ ರಕ್ತ ಪದರದ ಮೂಲಕ ಸೋಸಲ್ಪಟ್ಟು ದ್ರವ ಎರಡು ಪದರಗಳ ನಡುವೆ ಇರುವ ಸ್ಥಳದಲ್ಲಿ ಶೇಖರವಾಗುವುದೆಂದೂ ಮುಂದ ಇದು ನೆಫ್ರಾನಿನ ನಾಳಭಾಗದಲ್ಲಿ ಮಾರ್ಪಟ್ಟು ಮೂತ್ರವಾಗಿ ಮೂತ್ರಕೋಶಕ್ಕೆ ಸಾಗುವುದೆಂದೂ ಈತ ಮೂತ್ರೋತ್ಪತ್ತಿಯ ಬಗ್ಗೆ ಒಂದು ಪ್ರತಿಪಾದನೆ ಮಂಡಿಸಿದ. ಈತ ವಿಶದೀಕರಿಸಿದ ಸ್ನಾಯು, ಮೂತ್ರಜನಕಾಂಗ ಹಾಗೂ ಕಣ್ಣಿನ ರಚನೆಗಳಲ್ಲಿ ಇಂದಿಗೂ ಇವನ ಗೌರವಾರ್ಥ ಬೌಮನ್ನನ ಸಾರ್ಕಸ್ ಎಲಿಮೆಂಟ್, ಬೌಮನ್ನನ ಕವಚ ಮತ್ತು ಬೌಮನ್ನನ ಪೊರೆ ಎಂಬ ಅಂಗಾಂಶಗಳನ್ನು ಹೆಸರಿಸಿ ವ್ಯವಹರಿಸುವುದಿದೆ.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ